ಟ್ರಿಬ್ಯೂನ್
ಪಂಜಾಬಿನ ಜನಜೀವನದಲ್ಲಿ ಪ್ರಮುಖಪಾತ್ರ ವಹಿಸಿದ, ವಹಿಸುತ್ತಿರುವ, ರಾಷ್ಟ್ರೀಯ ಹೋರಾಟದಲ್ಲಿ ಅಗ್ರಣಿಯಾಗಿ ಪಾಲ್ಗೊಂಡು ಪಂಜಾಬಿಗಳಿಗೆ ಮಾರ್ಗದರ್ಶನ ಮಾಡಿದ, ಕಟುಟೀಕೆ ಮತ್ತು ಖಂಡತುಂಡ ಅಗ್ರಲೇಖನಗಳಿಗೆ ಹೆಸರಾದ ಇಂಗ್ಲಿಷ್ ದಿನಪತ್ರಿಕೆ. ಅವಿಭಕ್ತ ಪಂಜಾಬಿನ ರಾಜಧಾನಿಯಾಗಿದ್ದ ಲಾಹೋರಿನಲ್ಲಿ 1881ರಲ್ಲಿ ದಯಾಲ್‍ಸಿಂಗ್ ಮಜೀಥಿಯಾ ಅವರಿಂದ ಪ್ರಾರಂಭವಾಯಿತು. ಇವರಿಗೆ ಸುರೇಂದ್ರನಾಥ ಬ್ಯಾನರ್ಜಿ ವಿಶೇಷವಾಗಿ ನೆರವು ನೀಡಿದರು. ಪೌರಸ್ತ್ಯರಲ್ಲಿ ಜಾಗೃತಿಯುಂಟುಮಾಡುವುದೂ ಪಾಶ್ಚಾತ್ಯ ಜೀವನದ ಪರಿಚಯ ಮಾಡಿಕೊಡುವುದೂ ಇದರ ಆರಂಭದ ಉದ್ದೇಶ. ಕ್ರಮೇಣ ಇದು ಉಜ್ವಲ ರಾಷ್ಟ್ರೀಯ ಪತ್ರಿಕೆಯಾಗಿ ಪರಿಣಮಿಸಿತು. ಆರಂಭದಲ್ಲಿ ತ್ರೈವಾರ ಪತ್ರಿಕೆಯಾಗಿದ್ದ ಟ್ರಿಬ್ಯೂನ್ 1906ರಲ್ಲಿ ದಿನಪತ್ರಿಕೆಯಾಯಿತು. ಆ ಸಂದರ್ಭದಲ್ಲಿ ಕಾಳಿಪ್ರಸನ್ನ ಚಟರ್ಜಿ ಅವರು ಬರೆಯುತ್ತಿದ್ದ ಸಂಪಾದಕೀಯ ಟಿಪ್ಪಣಿಗಳಿಂದ ಪತ್ರಿಕೆ ತುಂಬ ಜನಪ್ರಿಯತೆ ಗಳಿಸಿತು. ಭಾರತ ಸ್ವತಂತ್ರವಾದ ಮೇಲೆ ಈ ಪತ್ರಿಕೆ ಅಂಬಾಲಾದಿಂದ ಪ್ರಕಟವಾಗತೊಡಗಿತು. 21 ವರ್ಷಗಳ ಅನಂತರ ಚಂಡೀಗಢದಿಂದಲೂ, ಕೆಲಕಾಲಾನಂತರ ನೊಯಿಡಾದಿಂದಲೂ ಪ್ರಕಟವಾಗುತ್ತಿದೆ. ಟ್ರಿಬ್ಯೂನ್ ಪಂಜಾಬಿನ ಪತ್ರಿಕೆಯಾದರೂ ಶೀತಲಕಾಂಡ ಚಟರ್ಜಿ, ಬಿಪಿನ್‍ಚಂದ್ರಪಾಲ್, ನಾಗೇಂದ್ರನಾಥ ಗುಪ್ತ, ಕಾಳಿನಾಥರೇ ಮುಂತಾದ ಅನೇಕ ಬಂಗಾಲಿಗಳು ಪತ್ರಿಕೆಯ ಸಂಪಾದಕರಾಗಿ ಸಹಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಈಗಿನ ಸಂಪಾದಕರು ಎಚ್ ಕೆ ದುವಾ. 
(ಎಸ್.ವಿ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ